ವಯಸ್ಕರ ಶಿಕ್ಷಣ
ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾದ ವಯಸ್ಕರಿಗೆ ಶಿಕ್ಷಣ ನೀಡುವ ವ್ಯವಸ್ಥೆ (ಅಡಲ್ಟ್ ಎಜುಕೇಶನ್). ಇದು ಆಯಾ ದೇಶಗಳ ಶೈಕ್ಷಣಿಕ ಪರಿಸರ, ವ್ಯವಸ್ಥೆಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಯುರೋಪ್ ದೇಶಗಳಲ್ಲಿ ವೃತ್ತಿಪರ ಶಿಕ್ಷಣ, ಬಿಡುವಿನ ಅವಧಿಯ ಶಿಕ್ಷಣ, ಮುಂದುವರಿಕೆ ಶಿಕ್ಷಣ ಮೊದಲಾದುವನ್ನೂ ವಯಸ್ಕರ ಶಿಕ್ಷಣದಲ್ಲೇ ಗುರುತಿಸುವರು.

	ಭಾರತದಲ್ಲಿ ಮೂಲಭೂತ ಶಿಕ್ಷಣದ (ಬೇಸಿಕ್ ಎಜುಕೇಶನ್) ಹೆಸರಿನಲ್ಲಿ 1947ರ ವರೆಗೆ ರಾತ್ರಿ ಶಾಲೆಗಳು ನಡೆಯುತ್ತಿದ್ದುವು. 1947-66ರ ನಡುವೆ ಇದು ಸಾಮಾಜಿಕ ಶಿಕ್ಷಣ ನೀಡುವ ಪ್ರಜಾ ಸಾಕ್ಷರತೆಯಾಯಿತು (ಸಿವಿಕ್ ಲಿಟ್ರಸಿ). 1967-77ರ ನಡುವೆ ಶ್ರಮ ನಿಷ್ಠ ದೃಷ್ಟಿಯ ಕ್ರಿಯಾತ್ಮಕ ಸಾಕ್ಷರತೆ (ಫಂಕ್ಷನಲ್ ಲಿಟ್ರಸಿ) ಜಾರಿಗೆ ಬಂದು ರೈತರಿಗೆ ಶಿಕ್ಷಣ ನೀಡುವ, ಶ್ರಮಿಕ ವಿದ್ಯಾಪೀಠ ಸ್ಥಾಪಿಸುವ ಯೋಜನೆಗಳು ಜಾರಿಯಾದುವು. 1978ರ ತರುವಾಯ ಸಾಮಾಜಿಕ ಬದಲಾವಣೆಯ ದೃಷ್ಟಿಯುಳ್ಳ ಅಭಿವೃದ್ಧಿದಾಯಕ ಸಾಕ್ಷರತೆ (ಡೆವಲಪ್‍ಮೆಂಟಲ್ ಲಿಟ್ರಸಿ) ಜಾರಿಯಲ್ಲಿದ್ದು ಇದು ಸಾಕ್ಷರತಾ ಆಂದೋಲನ ನಡೆಸುತ್ತಿದೆ. ಭಾರತದ ಸರ್ಕಾರ 1978 ಅಕ್ಟೋಬರ್ 2 ರಿಂದ ರಾಷ್ಟ್ರೀಯ ವಯಸ್ಕ ಶಿಕ್ಷಣ ಯೋಜನೆ (ನ್ಯಾಶನಲ್ ಅಡಲ್ಟ್ ಎಜುಕೇಶನ್ ಪ್ರೋಗ್ರಾಮ್-ಎನ್‍ಎಇಪಿ) ಆರಂಭಿಸಿ 15-35 ವಯೋಮಾನದ ಅನಕ್ಷರಸ್ಥರಿಗೆ ಶಿಕ್ಷಣ ನೀಡುತ್ತಿದೆ. ಇದರ ಅಂಗವಾಗಿ ಗ್ರಾಮೀಣ ಕ್ರಿಯಾತ್ಮಕ ಸಾಕ್ಷರತಾ ಯೋಜನೆ (ರೂರಲ್ ಫಂಕ್ಷನಲ್ ಲಿಟ್ರಸಿ ಪ್ರೋಗ್ರಾಮ್-ಆರ್‍ಎಫ್‍ಎಲ್‍ಪಿ)ಯನ್ನು 1986 ರಿಂದ ಆರಂಭಿಸಿದೆ. ಇದರಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಂಥ (ಎನ್ ಎಸ್ ಎಸ್) ವಿದ್ಯಾರ್ಥಿ ಸ್ವಯಂಸೇವಕರು ಪಾಲ್ಗೊಳ್ಳುವ ಅವಕಾಶವಿದೆ. ಇವುಗಳಿಗೆ ಪೂರಕವಾಗಿ 1988 ರಿಂದ ರಾಷ್ಟ್ರೀಯ ಸಾಕ್ಷರತಾ ಆಂದೋಲನವನ್ನೂ (ನ್ಯಾಶನಲ್ ಲಿಟ್ರಸಿ ಮಿಶನ್-ಎನ್‍ಎಲ್‍ಎಮ್) ಆರಂಭಿಸಿದೆ. ಇದರಡಿಯಲ್ಲಿ ಸು. 500 ಸ್ವಯಂಸೇವಾ ಸಂಘಗಳು, ಶ್ರಮಿಕ ವಿದ್ಯಾಪೀಠಗಳು, ರಾಜ್ಯಗಳಲ್ಲಿನ 16 ಸಂಪನ್ಮೂಲ ಕೇಂದ್ರಗಳು ಇದರ ಯಶಸ್ಸಿಗೆ ದುಡಿಯುತ್ತಿದೆ. ಇದರಡಿಯಲ್ಲಿ ದೇಶಾದ್ಯಂತ ಸು.513 ಯೋಜನೆಗಳು ಕಾರ್ಯಾರಂಭಮಾಡಿವೆ.	* 

 	ಕರ್ನಾಟಕದಲ್ಲಿ ವಯಸ್ಕರ ಶಿಕ್ಷಣ ಕ್ಷೇತ್ರದಲ್ಲಿ ಪ್ರಧಾನವಾಗಿ ಎರಡು ಸಂಸ್ಥೆಗಳು ಸೇವೆ ಸಲ್ಲಿಸುತ್ತಿವೆ: 1. ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿ, ಮೈಸೂರು, 2. ಕರ್ನಾಟಕ ಪ್ರಾದೇಶಿಕ ಸಮಾಜ ಶಿಕ್ಷಣ ಸಮಿತಿ, ಬೆಳಗಾಂವಿ.

	ಭಾರತ ಸರ್ಕಾರದ ಸಾಮೂಹಿಕ ಅಭಿವೃದ್ಧಿ ಯೋಜನೆಯ ಪ್ರಕಾರ ಕರ್ನಾಟಕ ರಾಜ್ಯದಲ್ಲೂ 1952ರಲ್ಲಿ ಆ ಕಾರ್ಯಕ್ರಮ ಪ್ರಾರಂಭವಾಯಿತು. ಅದರ ಅಂಗವಾಗಿ ಸಮಾಜ ಶಿಕ್ಷಣ ಕಾರ್ಯಕ್ರಮಗಳೂ ಪ್ರಾರಂಭವಾದವು. ಈ ಕಾರ್ಯಕ್ರಮವನ್ನು ಕಾರ್ಯಗತಮಾಡಲು ಪ್ರತಿಯೊಂದು ಅಭಿವೃದ್ಧಿ ಕ್ಷೇತ್ರಕ್ಕೂ ಒಬ್ಬ ಸಮಾಜ ಶಿಕ್ಷಣ ಕಾರ್ಯಕರ್ತ ಮತ್ತು ಮುಖ್ಯ ಸೇವಕಿಯೊಬ್ಬಳು ಇರುವರು.

	ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ಒಂದು ಖಾಸಗಿ ಸಂಸ್ಥೆ. ಇದು ಸರ್ಕಾರದಿಂದ ಅಂಗೀಕೃತವಾದ ತನ್ನದೇ ಆದ ಅಂಗರಚನೆಯನ್ನು ಹೊಂದಿದೆ. ಈ ಸಂಸ್ಥೆ ಪ್ರಾರಂಭದಲ್ಲಿ ಒಬ್ಬ ಚುನಾಯಿತ ಅಧ್ಯಕ್ಷರನ್ನು ಮತ್ತು ಪ್ರಧಾನ ಕಾರ್ಯದರ್ಶಿಯವರನ್ನು ಹೊಂದಿತ್ತು. 1965ರಿಂದ ಕರ್ನಾಟಕ ರಾಜ್ಯ ಸರ್ಕಾರ ಸಮಿತಿಯ ಅಧ್ಯಕ್ಷರನ್ನು ನಾಮಕರಣ ಮಾಡುತ್ತಿದೆ.

	ಸಮಿತಿ ತನ್ನ ಕಾರ್ಯಕ್ಕೆ ನೆರವಾಗುವಂತೆ ಹನ್ನೆರಡು ತಜ್ಞರ ಉಪಸಮಿತಿಗಳನ್ನು ರಚಿಸಿದೆ. ಈ ಉಪಸಮಿತಿಗಳು ತಮಗೆ ಸೀಮಿತವಾದ ವಿಷಯಗಳ ಬಗ್ಗೆ ಪರ್ಯಾಲೋಚಿಸಿ ಕೇಂದ್ರ ಸಮಿತಿಗೆ ಸಲಹೆ ನೀಡುವುವು. ಆ ಉಪಸಮಿತಿಗಳು ಈ ರೀತಿ ಇವೆ: 1. ಜನಪದ ಕಲೆ, 2. ಲೋಕವ್ಯವಹಾರ ಶಿಕ್ಷಣ, 3. ಕನ್ನಡ ಲಿಪಿ ಸಂಸ್ಕರಣ, 4. ಪುಸ್ತಕ ಭಂಡಾರ, 5. ಪ್ರಕಟಣೆ, 6. ಪುಸ್ತಕ ಪ್ರಪಂಚ ಸಂಪಾದಕ ಮಂಡಳಿ, 7. ವಿದ್ಯಾಪೀಠ, 8. ಉಗ್ರಾಣ, 9. ಸಂಶೋಧನೆ ಮತ್ತು ಅಂಕಿಅಂಶಗಳ ಸಂಗ್ರಹ, 10. ಚಲನಚಿತ್ರ ತಯಾರಿಕೆ, 11. ಮಹಿಳಾ ಸಮಿತಿ ಮತ್ತು 12. ಬೆಳಕು ಸಂಪಾದಕ ಮಂಡಳಿ. ಆವಶ್ಯಕತೆ ಬಿದ್ದಾಗ ಕೇಂದ್ರ ಸಮಿತಿ ಇಂತಹ ಉಪಸಮಿತಿಗಳನ್ನು ರಚಿಸುವುದು. ಈಗ 3, 9, 11 ಮತ್ತು 12ನೆಯ ಉಪಸಮಿತಿಗಳಿಲ್ಲ.

	ಪ್ರತಿಯೊಂದು ಜಿಲ್ಲೆಗೆ ಒಂದು ಜಿಲ್ಲಾ ಸಮಿತಿ ಇದೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಅದರ ಅಧ್ಯಕ್ಷರು. ಮೈಸೂರು ನಗರ ಮತ್ತು ಬೆಂಗಳೂರು ನಗರಗಳಿಗೆ ಪ್ರತ್ಯೇಕ ನಗರ ಸಮಿತಿಗಳಿವೆ. ಆಯಾ ನಗರದ ಮಹಾನಗರಪಾಲಿಕೆಯ ನಗರಸಭಾಧ್ಯಕ್ಷರು ಅದರ ಅಧ್ಯಕ್ಷರು.

	ರೈತರ ಕ್ರಿಯಾತ್ಮಕ ಸಾಕ್ಷರತಾ ಯೋಜನೆ ಭಾರತ ಸರ್ಕಾರದ ರಾಷ್ಟ್ರೀಯ ಕಾರ್ಯಕ್ರಮ, ಶಕ್ತಿಮಾನ್ ಆಹಾರ ತಳಿಗಳ ವಿಚಾರದಲ್ಲಿ ಅನಕ್ಷರಸ್ಥ ರೈತರಿಗೆ ಮಾಹಿತಿ ಮತ್ತು ಸಾಕ್ಷರತೆಯಿಂದ ಕೂಡಿದ ಸಮಗ್ರ ಸಾಕ್ಷರತಾ ಕಾರ್ಯಕ್ರಮವನ್ನು ನಡೆಸುವುದು ಈ ಯೋಜನೆಯ ಉದ್ದೇಶ. ಈ ಕಾರ್ಯಕ್ರಮ ಈಗ ರಾಜ್ಯದ ಎಂಟು ಜಿಲ್ಲೆಗಳಲ್ಲಿ ನಡೆಯುತ್ತಿದೆ. ಅದಕ್ಕೆ ಬೇಕಾದ ಪಠ್ಯಪುಸ್ತಕ ಮತ್ತು ಪೂರಕ ಪುಸ್ತಕಗಳನ್ನು ಸಮಿತಿಯ ಸಂಶೋಧನಾ ಶಾಖೆ ರಚಿಸಿಕೊಟ್ಟಿದೆ. ಅಲ್ಲದೆ ಈ ಯೋಜನೆಯಲ್ಲಿ ನಿರತರಾದ ಉಪಾಧ್ಯಾಯರ, ಮೇಲ್ವಿಚಾರಕರ ಮತ್ತು ಇತರ ಕಾರ್ಯಕರ್ತರ ತರಬೇತನ್ನು ಸಮಿತಿ ಕೈಕೊಳ್ಳುವುದು.

	1976-77ನೆಯ ಸಾಲಿಗೆ 15-25ರ ವಯೋಮಿತಿಯ ಗ್ರಾಮೀಣ ಯುವಕರಿಗೆ ಅನೌಪಚಾರಿಕ ಶಿಕ್ಷಣ ಯೋಜನೆಯನ್ನು ಎರಡು ಜಿಲ್ಲೆಗಳಿಗೆ ಅನ್ವಯಿಸಲಾಯಿತು. 1977-78ನೆಯ ಸಾಲಿನಲ್ಲಿ ಇನ್ನು ನಾಲ್ಕು ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಒಂದು ಜಿಲ್ಲೆಯಲ್ಲಿ ನಡೆಯಲಿರುವ ಅನೌಪಚಾರಿಕ ಶಿಕ್ಷಣ ಯೋಜನೆಯ ಖರ್ಚನ್ನು ಭಾರತ ಸರ್ಕಾರ, ಇನ್ನೊಂದು ಜಿಲ್ಲೆಯಲ್ಲಿ ವೆಚ್ಚವನ್ನು ಆಯಾ ರಾಜ್ಯ ಸರ್ಕಾರ ವಹಿಸಬೇಕೆಂಬ ನಿಯಮವಿದೆ. ಈ ಯೋಜನೆಯನ್ನು ಕಾರ್ಯಗತ ಮಾಡಲು ಬೇಕಾಗುವ ಸೂಕ್ತ ಸಾಹಿತ್ಯ ರಚನೆ ಮತ್ತು ಕಾರ್ಯಕರ್ತರ ತರಬೇತಿಯ ಜವಾಬ್ದಾರಿಯನ್ನು ಸಹಕಾರ ಸಮಿತಿಗೆ ವಹಿಸಿದೆ.

	ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಕಾರ್ಯಕ್ರಮಗಳು: ಮೈಸೂರು ಸಂಸ್ಥಾನದಲ್ಲಿ ಪ್ರಪ್ರಥಮವಾಗಿ ವಯಸ್ಕರ ನಿರಕ್ಷರತಾ ನಿವಾರಣಾ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ಎಂ. ವಿಶ್ವೇಶ್ವರಯ್ಯನವರಿಗೆ ಸಲ್ಲುವುದು. ಆ ಯೋಜನೆಯ ಪ್ರಕಾರ 1912ರಲ್ಲಿ ಸಂಸ್ಥಾನಾದ್ಯಂತ ವಯಸ್ಕರಿಗೆ 7,000 ಅಕ್ಷರ ಪ್ರಚಾರ ತರಗತಿಗಳು ಪ್ರಾರಂಭವಾದುವು. ಜೊತೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚಾರಿ ಪುಸ್ತಕ ಭಂಡಾರಗಳು ಅಸ್ತಿತ್ವಕ್ಕೆ ಬಂದವು. ಜನತೆಯಲ್ಲಿ ವೈಜ್ಞಾನಿಕ ಮನೋಭಾವನೆಯನ್ನುಂಟು ಮಾಡಲು ವಿಜ್ಞಾನ ಎಂಬ ಪತ್ರಿಕೆ ಪ್ರಕಟವಾಯಿತು. ಆದರೆ ವಿಶ್ವೇಶ್ವರಯ್ಯನವರ ಈ ಯೋಜನೆ ಬಹುಕಾಲ ಮುಂದುವರಿಯಲಿಲ್ಲ.

	1940ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಸಮಾಜ ಸೇವಾ ಉಪಸಮಿತಿ ಅಲ್ಪಪ್ರಮಾಣದ ಅಕ್ಷರ ಪ್ರಚಾರ ಕಾರ್ಯಕ್ರಮವನ್ನು ಕೈಗೊಂಡಿತು. ಈ ಕಾರ್ಯಕ್ಕೆ ಸಂಘ 300 ರೂಪಾಯಿಗಳನ್ನು ಮಂಜೂರು ಮಾಡಿತು. ಸಂಘದ ಕರೆಗೆ ಓಗೊಟ್ಟು 600 ಮಂದಿ ವಿದ್ಯಾರ್ಥಿಗಳು ಅಕ್ಷರ ಪ್ರಚಾರ ಸೇವೆ ಕೈಗೊಳ್ಳಲು ಮುಂದಾದರು. ಅವರೆಲ್ಲರಿಗೂ ವಯಸ್ಕರ ಮನಶ್ಶಾಸ್ತ್ರ ಬೋಧನಾಕ್ರಮ ಮತ್ತು ತರಗತಿ ನಡೆಸುವ ಬಗ್ಗೆ ತರಬೇತಿ ಕೊಡಲಾಯಿತು. ಮೈಸೂರು ಪುರಸಭೆಯೂ ಈ ಕಾರ್ಯದಲ್ಲಿ ಸಹಕರಿಸಿತು.

	ಸಮಿತಿಯ ಕಾರ್ಯ ವಿಸ್ತಾರವಾದಂತೆ 1941ರ ಪ್ರಾರಂಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅಂದಿನ ಉಪಕುಲಪತಿಗಳ ಅಧ್ಯಕ್ಷತೆಯಲ್ಲಿ ಮೈಸೂರು ಅಕ್ಷರ ಪ್ರಚಾರ ಸಮಿತಿ ಜನ್ಮ ತಾಳಿತು. ಸಮಿತಿ ಇಡೀ ಮೈಸೂರು ಸಂಸ್ಥಾನಕ್ಕೆ ಅನ್ವಯವಾಗುವಂತೆ ಅಕ್ಷರ ಪ್ರಚಾರ ಯೋಜನೆಯನ್ನು ತಯಾರಿಸಿ ಸರ್ಕಾರದ ಒಪ್ಪಿಗೆಗೆ ಕಳುಹಿಸಿತು. 1941 ಅಕ್ಟೋಬರಿನಲ್ಲಿ ಆಗಿನ ವಿದ್ಯಾಮಂತ್ರಿಗಳು ವಯಸ್ಕರ ಶಿಕ್ಷಣ ಕಾರ್ಯಕರ್ತರ ಮತ್ತು ಮುಂದಾಳುಗಳ ಸಭೆಯನ್ನು ಕರೆದು ಸಮಿತಿಯ ಯೋಜನೆಯ ಬಗ್ಗೆ ವಿಚಾರವಿನಿಮಯ ಮಾಡಿದರು. ತತ್ಪರಿಣಾಮವಾಗಿ ಬಿ.ಎಂ. ಶ್ರೀಕಂಠಯ್ಯನವರ ಅಧ್ಯಕ್ಷತೆಯಲ್ಲಿ ಮೈಸೂರು ಸಂಸ್ಥಾನದ ಅಕ್ಷರ ಪ್ರಚಾರ ಸಮಿತಿ ಅಸ್ತಿತ್ವಕ್ಕೆ ಬಂತು. ಸರ್ಕಾರ ಸಮಿತಿಯ ಯೋಜನೆಯನ್ನು ಪರಿಶೀಲಿಸಿ ಮೊದಲ ಸಾಲಿಗೆ 5,000 ರೂಪಾಯಿಗಳನ್ನು ಮಂಜೂರು ಮಾಡಿತು. ಸಮಿತಿಯ ಕಾರ್ಯಕ್ರಮಗಳು ವಿಸ್ತಾರವಾದಂತೆ ಸರ್ಕಾರ ತನ್ನ ಅನುದಾನವನ್ನು ಹೆಚ್ಚಿಸಿ ಪ್ರೋತ್ಸಾಹಿಸಿಕೊಂಡು ಬಂದಿದೆ. 1977-78ನೆಯ ಸಾಲಿಗೆ ರಾಜ್ಯ ಸರ್ಕಾರದ ಅನುದಾನ 27.5 ಲಕ್ಷ ರೂಪಾಯಿ. ಅಕ್ಷರ ಪ್ರಚಾರದ ಕೆಲಸ ವ್ಯಾಪಕವಾಗಿ ನಡೆಯಲು ರಾಜ್ಯಸರ್ಕಾರ ತಾಲ್ಲೂಕು ಮಂಡಳಿ ಮತ್ತು ಪುರಸಭೆಗಳು ತಮ್ಮ ಆಯವ್ಯಯದಲ್ಲಿ ಸೇ. 5ರಷ್ಟು ಹಣವನ್ನು ನಿರಕ್ಷರತಾ ನಿವಾರಣೆಗೆ ಮೀಸಲಾಗಿಡಲು ತಿಳಿಸಿತು.

	ಈ ಸಮಿತಿ ಅಕ್ಷರ ಪ್ರಚಾರದ ಜೊತೆಗೆ ಇತರ ಪೂರಕ ಕಾರ್ಯಕ್ರಮ ಗಳನ್ನು ಪ್ರಾರಂಭಿಸಿತು. ಆದ್ದರಿಂದ 1945ರಲ್ಲಿ ಸಮಿತಿ ತನ್ನ ಹೆಸರನ್ನು ಸಂಸ್ಥಾನದ ವಯಸ್ಕರ ಶಿಕ್ಷಣ ಸಮಿತಿ ಎಂಬುದಾಗಿ ಬದಲಾಯಿಸಿ ಕೊಂಡಿತು. ಈಗ ಇದು ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ಎಂದಾಗಿದೆ. ಸಮಿತಿ ತನ್ನ ಕಾರ್ಯವನ್ನು ಹಳೆಯ ಮೈಸೂರಿನ ಹತ್ತು ಜಿಲ್ಲೆಗಳಲ್ಲಿ ವ್ಯಾಪಕವಾಗಿ ವಿಸ್ತರಿಸಿಕೊಂಡಿದೆ. ಗಾಂಧಿ ಶತಾಬ್ದಿ ವರ್ಷದಲ್ಲಿ ಸಮಿತಿ ತನ್ನ ಕಾರ್ಯಕ್ರಮವನ್ನು ಇತರ ಹೊಸ ಜಿಲ್ಲೆಗಳಿಗೆ ಸ್ವಲ್ಪಮಟ್ಟಿಗೆ ಹರಡಿದೆ. ಅದರ ಕಾರ್ಯಕ್ರಮಗಳಲ್ಲಿ ನಿರಕ್ಷರತಾ ನಿವಾರಣೆ, ವಿದ್ಯಾಪೀಠಗಳ ಸ್ಥಾಪನೆ, ಪುಸ್ತಕ ಭಂಡಾರಗಳ ವ್ಯವಸ್ಥೆ, ಪ್ರಕಟಣೆ, ಗ್ರಾಮಸೇವಾ ಶಿಬಿರ, ಜನತಾ ಶಿಕ್ಷಣ ಕ್ಷೇತ್ರ ಮುಂತಾದ ಯೋಜನೆಗಳು ಸೇರಿವೆ.

	ವಯಸ್ಕರ ನಿರಕ್ಷರತಾ ನಿವಾರಣೆ ಸಮಿತಿಯ ಪ್ರಧಾನ ಕಾರ್ಯಕ್ರಮ; 15 ರಿಂದ 45 ವಯೋಮಿತಿಯ ಅನಕ್ಷರಸ್ಥ ವಯಸ್ಕರಿಗೆ ಓದುಬರೆಹ ಮತ್ತು ಲೆಕ್ಕ ಹೇಳಿಕೊಡಲಾಗುವುದು. ವೃತ್ತಪತ್ರಿಕೆಗಳಲ್ಲಿ ಅಚ್ಚಾಗುವ ವರ್ತಮಾನ ಇತರ ಪ್ರಕಟಣೆಗಳನ್ನು ಓದಿ ಅರ್ಥಮಾಡಿಕೊಳ್ಳುವುದು, ಬಳಕೆಯಲ್ಲಿರುವ ತೂಕ, ಅಳತೆ ಮತ್ತು ನಾಣ್ಯಗಳ ವ್ಯವಹಾರದ ಸುಲಭ ಲೆಕ್ಕಾಚಾರವನ್ನು 1 ರಿಂದ 10ರ ಮಗ್ಗಿಯನ್ನು ಹೇಳುವುದು, ನೆಂಟರಿಷ್ಟರಿಗೆ ಕಾಗದವನ್ನು, ಕಚೇರಿಗೆ ಒಂದು ಅರ್ಜಿ ಬರೆಯುವ ಶಕ್ತಿಯನ್ನು ಪಡೆಯುವುದು, ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಗಳ ಸಾಮಾನ್ಯ ತಿಳಿವಳಿಕೆಯನ್ನು ಪಡೆಯುವುದು ಇವು ಸಾಧಿಸಬೇಕಾದ ಸಾಕ್ಷರತೆಯ ಮಟ್ಟ.

	ತರಗತಿಗಳು: ಅಕ್ಷರ ಪ್ರಚಾರ ತರಗತಿಯ ಅವಧಿ ಐದು ತಿಂಗಳು. ಇದು ಎರಡು ಹಂತಗಳಲ್ಲಿ ನಡೆಯುವುದು. ಮೊದಲನೆಯ ಹಂತ ಎರಡೂವರೆ ತಿಂಗಳು. ಈ ಅವಧಿಯಲ್ಲಿ ಅಕ್ಷರ ಪರಿಚಯ, ಕಾಗುಣಿತ ಮತ್ತು ಒತ್ತಕ್ಷರಗಳನ್ನು ಪದಪದ್ಧತಿಯ ಮೂಲಕ ಕಲಿಸಲಾಗುವುದು. ಅದಕ್ಕಾಗಿಯೇ ಶಾಸ್ತ್ರೀಯವಾಗಿ ರಚಿಸಿದ ಬಾ ಅಣ್ಣ ಓದು ಕಲಿ ಮತ್ತು ಇದನ್ನು ಓದಣ್ಣ ಎಂಬ ಎರಡು ಪಠ್ಯ ಪುಸ್ತಕಗಳಿವೆ. ವಯಸ್ಕರು ಓದುವ ಪುಸ್ತಕ, ಬೋಧನೆಯ ಎರಡನೆಯ ಹಂತ. ಮೊದಲನೆಯ ಹಂತದಲ್ಲಿ ಕಲಿತ ಓದು ಸ್ಥಾಯಿಯಾಗಿ ನಿಲ್ಲಲು ಪೋಷಕವಾಗುವಂತೆ ವಯಸ್ಕರು ಓದುವ ಪುಸ್ತಕ ಬಳಸಲಾಗುವುದು. ಜೊತೆಗೆ ಸುಲಭ ಲೆಕ್ಕಾಚಾರವನ್ನು ಕಲಿಸಲಾಗುವುದು. ತರಗತಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಕೊಡಲಾಗುವುದು. ಇದು ಸಾಂಪ್ರದಾಯಿಕ ಸಾಕ್ಷರತಾ ತರಗತಿಯ ವಿವರ. ಒಟ್ಟಿನಲ್ಲಿ ಸಮಿತಿ ಮೂರು ತೆರನಾದ ಅಕ್ಷರ ಪ್ರಚಾರ ತರಗತಿಗಳನ್ನು ನಡೆಸುತ್ತಿದೆ. ಕರ್ನಾಟಕ ರಾಜ್ಯದ ಮೂರು ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಸೇವಾಯೋಜನೆಯ (ಎನ್.ಎಸ್.ಎಸ್.) ವಿದ್ಯಾರ್ಥಿಗಳೂ ಈ ಕಾರ್ಯದಲ್ಲಿ ನಿರತರಾಗಿರುವರು. ಪ್ರಾರಂಭದಿಂದ 1976-77ನೆಯ ಸಾಲಿನವರೆಗೆ 9,45,254 ಮಂದಿ ವಯಸ್ಕರು ಅಕ್ಷರಸ್ಥರಾಗಿರುವುದಾಗಿ ವರದಿಯಾಗಿದೆ.

	ಪುಸ್ತಕ ಭಂಡಾರ ಮತ್ತು ವಾಚನಾಲಯ: ಹೊಸದಾಗಿ ಅಕ್ಷರ ಕಲಿತವರು ವಯಸ್ಕರ ಶಿಕ್ಷಣಮಾಲೆಯ ಪುಸ್ತಕಗಳಿಂದ ಆಕರ್ಷಿತರಾದರು. ಅವರು ಅಂತಹ ಪುಸ್ತಕಗಳಿಗೆ ಹೆಚ್ಚೆಚ್ಚು ಬೇಡಿಕೆಗಳನ್ನು ಸಲ್ಲಿಸಿದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಶಾಲೆಯನ್ನು ಬಿಟ್ಟವರಿಗೆ ಮತ್ತು ಇತರ ಗ್ರಾಮಸ್ಥರಿಗೆ ಪುಸ್ತಕಗಳು ಪ್ರಿಯವಾಗಿದ್ದುವು. ಹಳ್ಳಿಗಳಲ್ಲಿ ವಿವಿಧವರ್ಗದ ಓದುಗರ ಆವಶ್ಯಕತೆಗಳನ್ನು ಪೂರೈಸಲು ಗ್ರಾಮಪುಸ್ತಕ ಭಂಡಾರ ಯೋಜನೆ ಪ್ರಾರಂಭವಾಯಿತು. 1941ರ ಬೇಸಗೆಯಲ್ಲಿ ಕೃಷ್ಣರಾಜಪೇಟೆ ತಾಲ್ಲೂಕಿನ ಅಗ್ರಹಾರ ಬಾಚಹಳ್ಳಿಯಲ್ಲಿ ಮೊದಲನೆಯ ಪುಸ್ತಕ ಭಂಡಾರ ಪ್ರಾರಂಭವಾಯಿತು.

	ಗ್ರಾಮಪುಸ್ತಕ ಭಂಡಾರವನ್ನು ಸ್ಥಾಪಿಸಲು ಆಯಾ ಗ್ರಾಮ ಪಂಚಾಯಿತಿ, ಸಹಕಾರ ಸಂಘ ಇಲ್ಲವೆ ಆ ಗ್ರಾಮದ ಉದಾರಿ ಮಹನೀಯರಲ್ಲಿ ಯಾರಾದರೂ ನಿಗದಿಯಾದ ಚಂದಾಹಣವನ್ನು ಕೊಡಬೇಕೆಂಬ ನಿಯಮವಿದೆ. ವಯಸ್ಕರ ಶಿಕ್ಷಣ ಅಧಿಕಾರಿಗಳು ಗ್ರಾಮಪುಸ್ತಕ ಭಂಡಾರವನ್ನು ಮಂಜೂರು ಮಾಡುವ ಮುನ್ನ ಈ ಅಂಶಗಳನ್ನು ಪರಿಶೀಲಿಸುವರು. 1 ಗ್ರಾಮದ ಜನಸಂಖ್ಯೆ, 2 ವಿದ್ಯಾವಂತರ ಸಂಖ್ಯೆ, 3 ಪುಸ್ತಕ ಭಂಡಾರ ಯಶಸ್ವಿಯಾಗಿ ನಡೆಯಲು ಇರುವ ಸಂಪನ್ಮೂಲಗಳು, 4 ಪುಸ್ತಕಭಂಡಾರವನ್ನು ಇಡುವ ಸ್ಥಳ, 5 ಗ್ರಾಮದವರ ಉತ್ಸಾಹ ಹಾಗೂ ಅವರಿಂದ ದೊರಕಬಹುದಾದ ಪೀಠೋಪಕರಣ ಮುಂತಾದ ಸೌಕರ್ಯಗಳು. ಪ್ರಾರಂಭದಲ್ಲಿ ಪುಸ್ತಕಭಂಡಾರ ಪಡೆಯಲು 25 ರೂಪಾಯಿ ಚಂದಾ ಹಣ ಕೊಡಬೇಕಿತ್ತು. ಅನಂತರ ಅದನ್ನು 160 ರೂಪಾಯಿಗೆ ಏರಿಸಲಾಗಿತ್ತು.

	ಎರಡನೆಯ ವರ್ಷದಿಂದ ಗ್ರಾಮಸ್ಥರು ನೀಡುವ ವಂತಿಕೆಗೆ ಸಮನಾದ ಅನುದಾನವನ್ನು ಸಮಿತಿ ನೀಡುವುದು. ಅನುದಾನದ ಗರಿಷ್ಠ ಮಿತಿ 100 ರೂ. ಮೀರುವಂತಿಲ್ಲ. ಪ್ರತಿಯೊಂದು ಗ್ರಾಮಪುಸ್ತಕ ಭಂಡಾರವು ತನ್ನ ಆಯವ್ಯಯ ಪಟ್ಟಿಯನ್ನು ರಚಿಸಿ ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿಯ ಮಂಜೂರಾತಿಗೆ ಕಳುಹಿಸುವುದು.

	ವಾಚನಾಲಯ ಪುಸ್ತಕ ಭಂಡಾರದ ಒಂದು ಭಾಗ. ಪುಸ್ತಕ ಭಂಡಾರದ ಆಡಳಿತಕ್ಕಾಗಿ ರಚಿಸುವ ಸಮಿತಿಯು ತನ್ನ ಆಯವ್ಯಯ ಪಟ್ಟಿಗೆ ಒಳಪಟ್ಟಂತೆ ತನಗೆ ಬೇಕಾದ ಪತ್ರಿಕೆಗಳನ್ನು ತರಿಸಿಕೊಳ್ಳಬಹುದು.

	ಕೇಂದ್ರ ಪುಸ್ತಕ ಭಂಡಾರ: ಗ್ರಾಮ ಪುಸ್ತಕ ಭಂಡಾರಗಳ ಹೆಚ್ಚಿನ ಮತ್ತು ವಿಶೇಷ ಪುಸ್ತಕಗಳ ಬೇಡಿಕೆಯನ್ನು ಜಿಲ್ಲಾ ಕೇಂದ್ರ ಪುಸ್ತಕಭಂಡಾರಗಳು ಪೂರೈಸುವುವು. ಗ್ರಾಮ ಪುಸ್ತಕ ಭಂಡಾರಗಳು ಜಿಲ್ಲಾ ಕೇಂದ್ರ ಪುಸ್ತಕಭಂಡಾರಗಳ ಸದಸ್ಯರಾಗಿರಬೇಕು. ಪುಸ್ತಕಗಳನ್ನು ಕೇಂದ್ರ ಭಂಡಾರದಿಂದ ಎರವಲಾಗಿ ಪಡೆದು ತಿಂಗಳ ಅನಂತರ ವಾಪಸುಮಾಡಬೇಕೆಂಬ ನಿಯಮವಿದೆ. ಈಗ ಹತ್ತು ಜಿಲ್ಲಾ ಕೇಂದ್ರ ಪುಸ್ತಕ ಭಂಡಾರಗಳು ಮತ್ತು ಎರಡು ನಗರ ಕೇಂದ್ರ ಪುಸ್ತಕ ಭಂಡಾರಗಳಿವೆ.

	ಕ್ಷೇತ್ರೀಯ ಪುಸ್ತಕಭಂಡಾರ ಮತ್ತು ವಾಚನಾಲಯ: ಗ್ರಾಮಸ್ಥರಲ್ಲಿ ಪುಸ್ತಕ ಬೇಡಿಕೆ ಹೆಚ್ಚಾಗಿ ಅವರು ತಮ್ಮದೇ ಆದ ಒಂದು ಕೇಂದ್ರ ಪುಸ್ತಕ ಭಂಡಾರವನ್ನು ಹೊಂದಲು ಅಪೇಕ್ಷಿಸಬಹುದು. ಅಂಥ ಬೇಡಿಕೆಯನ್ನು ಪೂರೈಸುವುದೇ ಕ್ಷೇತ್ರೀಯ ಪುಸ್ತಕಭಂಡಾರ ಮತ್ತು ವಾಚನಾಲಯ ಯೋಜನೆಯ ಉದ್ದೇಶ. ಸಾಧಾರಣವಾಗಿ 3,000ಕ್ಕೂ ಮೇಲ್ಪಟ್ಟು ಜನ ವಾಸಿಸುವ ಕ್ಷೇತ್ರಗಳಲ್ಲಿ ಕ್ಷೇತ್ರೀಯ ಪುಸ್ತಕಭಂಡಾರ ಗಳನ್ನು ತೆರೆಯಬಹುದು. ಆದರೆ ಆಯಾ ಕ್ಷೇತ್ರೀಯ ಪುಸ್ತಕಭಂಡಾರ ಒಟ್ಟಾರೆ ಖರ್ಚಿನಲ್ಲಿ ಸೇ. 50ರಷ್ಟು ಹಣವನ್ನು ಆಯಾ ಗ್ರಾಮಸ್ಥರು ಕೊಡಬೇಕು. ಜೊತೆಗೆ ಪುಸ್ತಕಭಂಡಾರವನ್ನಿಡಲು ಒಂದು ಕಟ್ಟಡ ಒದಗಿಸಬೇಕು. ಪುಸ್ತಕ ಭಂಡಾರದ ಕೆಲಸವನ್ನು ನಿರ್ವಹಿಸಲು ಒಪ್ಪೊತ್ತಿನ ಕೆಲಸಗಾರನನ್ನು ನೇಮಿಸಿಕೊಳ್ಳಲಾಗುವುದು. ಆತನ ಸಂಬಳವನ್ನು ಆಯಾ ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿ ವಹಿಸಿಕೊಳ್ಳುವುದು. ರಾಜ್ಯದಲ್ಲಿ 28 ಕ್ಷೇತ್ರೀಯ ಪುಸ್ತಕಭಂಡಾರಗಳಿವೆ. ಒಂದೆರಡು ಕಡೆಗಳಲ್ಲಿ ಗ್ರಾಮಸ್ಥರು ಪುಸ್ತಕ ಭಂಡಾರದ ಅಭಿವೃದ್ಧಿಗೆ ಜಮೀನನ್ನು ಬಿಟ್ಟುಕೊಟ್ಟಿರುವ ಉದಾಹರಣೆಗಳುಂಟು.

	ಗ್ರಾಮಸೇವಾ ಶಿಬಿರಗಳು: ಪ್ರಾರಂಭದಿಂದಲೂ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಅಕ್ಷರಪ್ರಚಾರ ಕಾರ್ಯದಲ್ಲಿ ನೆರವು ನೀಡುತ್ತಿರುವರು. ಆದ್ದರಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳ ನೆರವಿನಿಂದ ಬೇಸಗೆ ರಜಾಕಾಲದಲ್ಲಿ ಗ್ರಾಮಸೇವಾ ಶಿಬಿರಗಳು ಪ್ರಾರಂಭವಾದವು. ಬೆಳಿಗ್ಗೆ ಪ್ರಾರ್ಥನೆ, ಪ್ರಭಾತ ಫೇರಿ, ಗ್ರಾಮನಿರ್ಮಲೀಕರಣ, ಅಕ್ಷರಪ್ರಚಾರ, ಸಾಂಸ್ಕøತಿಕ ಮತ್ತು ಮನರಂಜನ ಕಾರ್ಯಕ್ರಮ-ಇವೇ ಶಿಬಿರದ ಪ್ರತಿನಿತ್ಯದ ಕಾರ್ಯಕ್ರಮಗಳು.

	ಸಮಗ್ರ ಗ್ರಾಮಸೇವಾ ಯೋಜನೆ: ಸೇವಾಮನೋಭಾವವುಳ್ಳ ಸ್ವಯಂ ಸೇವಕರ ಸಹಕಾರ ಪಡೆದು ಗ್ರಾಮಾಂತರ ಪ್ರದೇಶಗಳಲ್ಲಿ ಸಮಗ್ರ ವಯಸ್ಕರ ಶಿಕ್ಷಣ ಚಟುವಟಿಕೆಗಳನ್ನು ನಡೆಸುವುದು ಈ ಯೋಜನೆಯ ಗುರಿ. ಈ ಕಾರ್ಯಕ್ರಮವನ್ನು ನಡೆಸಲು ಗ್ರಾಮಗಳಲ್ಲಿ ಪೂರ್ಣಕಾಲದ ಕಾರ್ಯಕರ್ತರಿರುವರು. ಗ್ರಾಮದ ಸರ್ವತೋಮುಖವಾದ ಅಭಿವೃದ್ಧಿಗೆ ಆಯಾ ಗ್ರಾಮಸ್ಥರು ಕಾರ್ಯಕರ್ತನೊಂದಿಗೆ ಸಹಕರಿಸಬೇಕು. ಈ ಪ್ರಯೋಗ ಕೆಲವು ಕಾಲ ಮಂಡ್ಯ ಜಿಲ್ಲೆಯಲ್ಲಿ ನಡೆಯಿತು.

	ವಿದ್ಯಾಪೀಠಗಳು: ಸಮಿತಿ 12 ವಿದ್ಯಾಪೀಠಗಳನ್ನು ನಡೆಸುತ್ತಿದೆ. ಅವುಗಳ ಪೈಕಿ ನಂಜನಗೂಡು ಮತ್ತು ಕೆಂಗೇರಿ ವಿದ್ಯಾಪೀಠಗಳು ಈಚೆಗೆ ಮಹಿಳೆಯರಿಗಾಗಿ ಪರಿವರ್ತನೆಯಾಗಿವೆ.

	ಜನತಾ ಶಿಕ್ಷಣ ಕೇಂದ್ರ, ಚಲನಚಿತ್ರ ಪ್ರದರ್ಶನ, ಪ್ರಚಾರ ಸಭೆಗಳ ಮೂಲಕ ಜ್ಞಾನಪ್ರಸಾರ ಗ್ರಾಮಕಲೆಗಳಿಗೆ ಪ್ರೋತ್ಸಾಹ. ಸಮಿತಿ 9 ಚಲನಚಿತ್ರ ಘಟಕಗಳನ್ನು ಹೊಂದಿದೆ. ಈ ಘಟಕಗಳು ಗ್ರಾಮಾಂತರಗಳಲ್ಲಿ ಸಂಚರಿಸಿ ವ್ಯವಸಾಯ, ಕೈಗಾರಿಕೆ, ಪಶುಪಾಲನೆ ಮುಂತಾದ ಚಲನಚಿತ್ರಗಳನ್ನು ಪ್ರದರ್ಶಿಸುವುವು. ನಮ್ಮ ಮೈಸೂರು, ಈರಬೀರಿ, ವಿದ್ಯಾಪೀಠ ಎಂಬ ಚಲನಚಿತ್ರಗಳನ್ನು ಸಮಿತಿ ತಯಾರಿಸಿದೆ. ಶಿಲ್ಪಕಲೆ, ಕೈಗಾರಿಕಾಸಂಪತ್ತು ಮುಂತಾದ ವಿವರಣೆ ಸೂಚಿಸುವ ವರ್ಣರಂಜಿತ ಚಿತ್ರ. ನಮ್ಮ ಮೈಸೂರು; ಸಾಕ್ಷರತೆಯ ಮಹತ್ತ್ವವನ್ನು ತಿಳಿಸುವ ಚಿತ್ರ ಈರಬೀರಿ. ಸಮಿತಿಯ ಕಾರ್ಯಕರ್ತರು ಆಗಾಗ್ಗೆ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಚಾರಸಭೆಗಳನ್ನು ಮತ್ತು ಚಲನಚಿತ್ರಗಳನ್ನು ಏರ್ಪಡಿಸುವರು. ಪ್ರತಿವರ್ಷ ಗಣರಾಜ್ಯದಿನದಂದು ದೆಹಲಿಯಲ್ಲಿ ಆಯಾ ರಾಜ್ಯದ ಉತ್ತಮ ಜನಪದ ಕಲೆಯ ಪ್ರದರ್ಶನ ನಡೆಯುವುದು.

	ಸಂಶೋಧನೆ: ಕನ್ನಡ ಲಿಪಿ ಸಂಸ್ಕರಣ ನಡೆಸಲು 1946ರಲ್ಲಿ ಒಂದು ಉಪಸಮಿತಿ ರಚನೆ ಆಯಿತು. 1947 ನವೆಂಬರಿನಲ್ಲಿ ನಡೆದ ಸಭೆಯ ನಡವಳಿಕೆಗಳ ಪ್ರಕಾರ ಹೊಸ ಲಿಪಿಯನ್ನು ಅನುಸರಿಸಿ 1,000 ಪುಸ್ತಕಗಳನ್ನು ಅಚ್ಚುಮಾಡಿ ಅವುಗಳನ್ನು ಮೈಸೂರು ನಗರದ ಕೆಲವು ಪ್ರಾಥಮಿಕ ಶಾಲೆಗಳಲ್ಲಿ ಪ್ರಯೋಗಿಸಬೇಕೆಂದು ನಿರ್ಧರಿಸಲಾಯಿತು. ಆದರೆ ಕಾರಣಾಂತರಗಳಿಂದ ಆ ಕೆಲಸ ನಡೆಯಲಿಲ್ಲ.

	ಕರ್ನಾಟಕ ಪ್ರಾದೇಶಿಕ ಸಮಾಜ ಶಿಕ್ಷಣ ಸಮಿತಿ, ಬೆಳಗಾಂವಿ: ಮುಂಬಯಿ ಪ್ರಾಂತ್ಯದಲ್ಲಿ ವಯಸ್ಕರ ಶಿಕ್ಷಣ ಪ್ರಾರಂಭವಾದಾಗ ಈ ಸಮಿತಿ ಅಸ್ತಿತ್ವಕ್ಕೆ ಬಂದಿತು. ಇತ್ತೀಚೆಗೆ ಈ ಸಮಿತಿಯನ್ನು ಸರ್ಕಾರ ರದ್ದು ಮಾಡಿರುವುದಾಗಿ ತಿಳಿದು ಬಂದಿದೆ. 1947-48ರಿಂದ 1967-68ರ ವರೆಗೆ 1,15,519 ಮಂದಿಯನ್ನು ಅಕ್ಷರಸ್ಥರನ್ನಾಗಿ ಮಾಡಲಾಗಿದೆ. ಪ್ರಕಾಶ ಎಂಬುದು ಸಮಿತಿ ಪ್ರಕಟಿಸುತ್ತಿದ್ದ ಮಾಸಪತ್ರಿಕೆ, ಇಪ್ಪತ್ತು ವಯಸ್ಕರ ಶಿಕ್ಷಣ ಮಾಲೆಯ ಪುಸ್ತಕಗಳು ಪ್ರಕಟವಾಗಿವೆ.

	ಕೊಡಗಿನಲ್ಲಿ 1951ರಲ್ಲಿ ಸಮಾಜ ಶಿಕ್ಷಣ ಪ್ರಾರಂಭವಾಯಿತು. ಅದರ ಅಂಗವಾಗಿ ಅಕ್ಷರ ಪ್ರಚಾರ ತರಗತಿಗಳು ವ್ಯವಸ್ಥೆಯಾದವು. ಅದಕ್ಕೆ ಪೋಷಕವಾಗಿ 104 ಗ್ರಾಮ ಪುಸ್ತಕ ಭಂಡಾರಗಳು ಸ್ಥಾಪನೆಯಾದವು. ಅವು ಸಾಮಾನ್ಯವಾಗಿ ಸಮಾಜ ಶಿಕ್ಷಣ ಕೇಂದ್ರ, ಪ್ರಾಥಮಿಕ ಶಾಲೆ ಮತ್ತು ಮಹಿಳಾ ಸಮಾಜಗಳಲ್ಲಿ ಕೆಲಸ ಮಾಡುತ್ತಿವೆ. ಪ್ರಾರಂಭದಲ್ಲಿ ಕೆಲವು ಪುಸ್ತಕ ಭಂಡಾರಗಳಿಗೆ ರೇಡಿಯೋಗಳನ್ನು ಒದಗಿಸಲಾಗಿದೆ. ಅಲ್ಲೊಂದು ಚಲನಚಿತ್ರ ಘಟಕವಿದೆ. ಈಗ ಕೊಡಗಿನಲ್ಲಿ ರೈತರ ಕ್ರಿಯಾತ್ಮಕ ಸಾಕ್ಷರತಾ ಯೋಜನೆ ನಡೆಯುತ್ತಿದೆ.

	ಸಾಮೂಹಿಕ ಅಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಅಕ್ಷರ ಪ್ರಚಾರ ಮತ್ತು ಪುಸ್ತಕ ಭಂಡಾರ ಕಾರ್ಯಕ್ರಮಗಳ ಜೊತೆಗೆ ಯುವಕ ಮಂಡಳಿ, ಮಹಿಳಾಮಂಡಳಿ, ಗ್ರಾಮ ಮುಖಂಡರ ತರಬೇತು, ರೈತರ ವಿಚಾರಗೋಷ್ಠಿ ಮತ್ತು ಶೈಕ್ಷಣಿಕ ಪ್ರವಾಸಗಳನ್ನು ಏರ್ಪಡಿಸಲಾಗುತ್ತಿದೆ. ಪೌಷ್ಟಿಕ ಆಹಾರ ಯೋಜನಾ ಕೇಂದ್ರಗಳು ಅಲ್ಲಲ್ಲೇ ನಡೆಯುತ್ತಿವೆ. ಗ್ರಾಮಾಂತರ ಜನರಿಗೆ ಔದ್ಯೋಗಿಕ ತರಬೇತಿ ಕೇಂದ್ರಗಳಿವೆ. ರೇಡಿಯೊ ಗೋಷ್ಠಿಗಳ ಮೂಲಕ ಜ್ಞಾನಪ್ರಸಾರ ನಡೆಯುತ್ತಿದೆ. ಹಳ್ಳಿಗಳಲ್ಲಿ ಭಜನೆ, ಕೋಲಾಟ, ನಾಟಕ, ಜನಪದ ಕಲೆ ಮುಂತಾದ ಮನರಂಜನೆಯ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಜನರ ಸುಪ್ತಚೇತನವನ್ನು ಹೊರಹೊಮ್ಮಿಸಲು ಸೂಕ್ತ ಪ್ರೋತ್ಸಾಹ ನೀಡಲಾಗುತ್ತಿದೆ.

	ವಯಸ್ಕರ ಸಾಹಿತ್ಯ: ವಯಸ್ಕರು ಓದುಬರೆಹ ಕಲಿತಮೇಲೆ ಓದನ್ನು ಮುಂದುವರಿಸಿಕೊಂಡು ಜ್ಞಾನಾರ್ಜನೆಮಾಡಲು ಸಹಕಾರಿಯಾಗುವಂಥ ಪೂರಕ ಸಾಹಿತ್ಯರಚನೆ ಅತ್ಯಗತ್ಯ. ಹೊಸದಾಗಿ ಅಕ್ಷರ ಕಲಿತವರಿಗೆ ಸಾಹಿತ್ಯ ರಚಿಸುವುದು ಒಂದು ಕಲೆ. ಅಷ್ಟೇ ಅಲ್ಲ, ರಚನೆಮಾಡುವ ವಿಧಾನ ಒಂದು ವಿಜ್ಞಾನವೂ ಹೌದು. ಆದ್ದರಿಂದ ಅದು ಶಾಸ್ತ್ರೀಯವಾಗಿ ಮತ್ತು ವ್ಯವಸ್ಥಿತವಾಗಿ ನಡಯಬೇಕಾದ ಕಾರ್ಯ. ಈ ಕಾರ್ಯದಲ್ಲಿ ಸಮಿತಿ ಸಾಕಷ್ಟು ಯಶಸ್ವಿಯಾಗಿ ಸಾಹಿತ್ಯ ರಚನಾ ಕಾರ್ಯವನ್ನು ಕೈಕೊಂಡಿದೆ. ಕರ್ನಾಟಕ ಪ್ರಾದೇಶಿಕ ಸಮಾಜ ಶಿಕ್ಷಣ ಸಮಿತಿಯೂ ಈ ದಿಸೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ. ಕೆಲವು ಖಾಸಗಿ ವ್ಯಕ್ತಿಗಳೂ ಈ ಕಾರ್ಯದಲ್ಲಿ ನಿರತರಾಗಿರುವರು. ರಾಜ್ಯದ ಮೂರು ವಿಶ್ವವಿದ್ಯಾಲಯಗಳು ಈ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಮರೆಯುವಂತಿಲ್ಲ. ಈ ಕೆಳಕಂಡ ಮಾಲೆಗಳಲ್ಲಿ ವಯಸ್ಕರ ಸಾಹಿತ್ಯ ರಚನೆಗೊಂಡಿದೆ:

	1. ಪಠ್ಯಪುಸ್ತಕ ರಚನೆ, 2. ಸಾಹಿತ್ಯರಚನಾಲಯದ ಪ್ರಕಟಣೆಗಳು, 3. ವಯಸ್ಕರ ಶಿಕ್ಷಣಮಾಲೆ, 4. ಪುಸ್ತಕಭಂಡಾರಮಾಲೆ, 5. ಜೀವವಿಜ್ಞಾನ ಮಾಲೆ, 6. ಪೌರಾಣಿಕ ಸಾಹಿತ್ಯಮಾಲೆ, 7. ಬೆಳ್ಳಿಯ ಹಬ್ಬದ ವಿಶೇಷ ಗ್ರಂಥ ಮಾಲೆ, 8. ಭಾಷಾಂತರ ಮಾಲೆ, 9. ವಿಶೇಷ ಪ್ರಕಟಣೆಗಳು, 10. ಖಾಸಗಿಯವರಿಂದ ರಚಿತವಾದ ಪ್ರಕಟಣೆಗಳು, 11. ವಿಶ್ವವಿದ್ಯಾಲಯದ ಪ್ರಚಾರೋಪನ್ಯಾಸಮಾಲೆ.

	ರಾಮಾಯಣ ಮತ್ತು ಮಹಾಭಾರತ ನಮ್ಮ ಜನರ ಸಾಂಸ್ಕøತಿಕ ಮುನ್ನಡೆಯ ಪ್ರತೀಕಗಳಾಗಿವೆ. ಜನಸಾಮಾನ್ಯರು ಓದಿ ಅರ್ಥಮಾಡಿ ಕೊಳ್ಳುವಂತೆ ಜನಪ್ರಿಯ ವಾಲ್ಮೀಕಿ ರಾಮಾಯಣವನ್ನು ಪ್ರಕಟಿಸಲಾಗಿದೆ (ಲೇಖಕರು: ಕುವೆಂಪು). ಹೆಸರಿಗೆ ತಕ್ಕಂತೆ ಈ ಪುಸ್ತಕ ಜನಪ್ರಿಯವಾಗಿರುವ ಕಾರಣ ಹಲವಾರು ಮುದ್ರಣಗಳನ್ನು ಕಂಡಿದೆ. ಕನ್ನಡನಾಡಿನ ಶಿವಶರಣಶರಣೆಯರ ಬಗ್ಗೆ ಸಿದ್ದಯ್ಯ ಪುರಾಣಿಕರು ಬರೆದಿರುವ ಶರಣಚರಿತಾಮೃತ ಗ್ರಂಥವನ್ನು ಸಮಿತಿ ಪ್ರಕಟಿಸಿದೆ. ಸಮಿತಿ ತನ್ನ 25 ವರ್ಷದ ಸಾರ್ಥಕ ಸೇವೆಯ ಸವಿನೆನಪಿಗಾಗಿ ಬೆಳ್ಳಿಯ ಹಬ್ಬದ ವಿಶೇಷ ಗ್ರಂಥಮಾಲೆಯಲ್ಲಿ ಎರಡು ಪುಸ್ತಕಗಳನ್ನು ಪ್ರಕಟಿಸಿದೆ.

	ವಯಸ್ಕರ ತರಗತಿಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಮತ್ತು ಹೊಸದಾಗಿ ಅಕ್ಷರ ಕಲಿತವರಿಗೆ ಅನುಕೂಲವಾಗುವಂತೆ ಸಮಿತಿ ಬೆಳಕು ವಾರಪತ್ರಿಕೆಯನ್ನು ಪ್ರಕಟಿಸುತ್ತಿದೆ. ವ್ಯವಸಾಯ, ಪಶುಪಾಲನೆ, ಆರೋಗ್ಯ ಮತ್ತು ನೈರ್ಮಲ್ಯ ಮುಂತಾದ ಉಪಯುಕ್ತ ವಿಷಯಗಳನ್ನು ಮತ್ತು ಆಯಾ ವಾರದ ಪ್ರಮುಖ ಸುದ್ದಿಸಮಾಚಾರಗಳನ್ನು ತಿಳಿಯಾದ ಭಾಷೆಯಲ್ಲಿ 14 ಪಾಯಿಂಟು ಅಕ್ಷರಗಳಲ್ಲಿ ಈ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು (ಬೆಳಗಾಂವಿ ಕರ್ನಾಟಕ ಪ್ರಾದೇಶಿಕ ಸಮಾಜ ಶಿಕ್ಷಣ ಸಮಿತಿ, ಪ್ರಕಾಶ ಎಂಬ ಪತ್ರಿಕೆಯನ್ನು ಪ್ರಕಟಿಸುತ್ತಿತ್ತು). ಕನ್ನಡ ಮತ್ತು ಇತರ ಭಾಷೆಗಳಲ್ಲಿ ಅಚ್ಚಾಗುವ ಪುಸ್ತಕಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ರೀಡರ್ಸ್ ಡೈಜೆಸ್ಟ್ ಮಾದರಿಯಲ್ಲಿ ಪುಸ್ತಕ ಪ್ರಪಂಚ (ನೋಡಿ- ಪುಸ್ತಕ-ಪ್ರಪಂಚ) ಮಾಸಪತ್ರಿಕೆಯನ್ನು ಸಮಿತಿ ಪ್ರಕಟಿಸುತ್ತಿತ್ತು. ಬೊಮ್ಮನಹಳ್ಳಿಯ ಕಿಂದರಿಜೋಗಿ ಮತ್ತು ಗೋವಿನಕಥೆಯ ವಿಷಯವನ್ನು ಗದ್ಯರೂಪದಲ್ಲಿ ತಿಳಿಗನ್ನಡದಲ್ಲಿ ಸಚಿತ್ರವಾಗಿ ಪ್ರಕಟಿಸಲಾಗಿದೆ. ಇವುಗಳ ಪ್ರಕಟಣೆಗೆ ಯುನೆಸ್ಕೊ ನೆರವು ನೀಡಿದೆ.

	ಪ್ರಚಾರದ ದೃಷ್ಟಿಯಿಂದ ವಯಸ್ಕರ ಶಿಕ್ಷಣ ಕಾರ್ಯಕ್ರಮಗಳನ್ನು ಇತರರಿಗೆ ಪರಿಚಯ ಮಾಡಿ ಕೊಡಲು ಇಂಗ್ಲಿಷ್ ಭಾಷೆಯಲ್ಲಿ ಅಡಲ್ಟ್ ಎಜುಕೇಷನ್ ಇನ್ ಮೈಸೂರು ಎಂಬ ಪುಸ್ತಕವನ್ನು ಪ್ರಕಟಿಸಲಾಗಿದೆ. ಸಮಿತಿ ಇದುವರೆಗೆ ವಿವಿಧ ಮಾಲೆಗಳಿಂದ ಒಟ್ಟು 243 ಪುಸ್ತಕಗಳನ್ನು ಪ್ರಕಟಿಸಿದೆ.

	ಮೈಸೂರು ವಿಶ್ವವಿದ್ಯಾನಿಲಯ, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ಶಾಖೆಗಳು ಪ್ರಚಾರೋಪನ್ಯಾಸ ಮಾಲೆಯಲ್ಲಿ ನೂರಾರು ಹೊತ್ತಿಗೆಗಳನ್ನು ಪ್ರಕಟಿಸಿವೆ. ಈ ಹೊತ್ತಿಗೆಗಳು ಜನಪ್ರಿಯವಾಗಿವೆ; ಕೆಲವು ಅನೇಕ ಮುದ್ರಣಗಳನ್ನು ಕಂಡಿವೆ. ವಯಸ್ಕರ ಸಾಹಿತ್ಯ ರಚನೆಯ ವಿಧಾನದಲ್ಲಿ ತಿಳಿವಳಿಕೆ ನೀಡಲು ಸಾಕ್ಷರತಾ ಸಾಹಿತ್ಯಸೂತ್ರಗಳು ಎಂಬ ಹೊತ್ತಿಗೆಯನ್ನು ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿದೆ. ಈಗ ಕರ್ನಾಟಕದಲ್ಲಿ ವಯಸ್ಕರ ಶಿಕ್ಷಣ ಸಮಿತಿಯನ್ನು ರದ್ದುಗೊಳಿಸಲಾಗಿದ್ದು ಅನೌಪಚಾರಿಕ ಶಿಕ್ಷಣದ ಅಡಿಯಲ್ಲಿ ಇದರ ಆಶಯಗಳು ಮುಂದುವರಿದಿವೆ.		
(ಟಿ.ಆರ್.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ